ಎಂ.ಎಂ. ಕಲಬುರ್ಗಿ ಅವರಿಗೆ ಆಳ್ವಾಸ್ ನುಡಿಸಿರಿ ಅಧ್ಯಕ್ಷಗಿರಿ
Udayavani | Sep 26, 2011
ಮೂಡಬಿದಿರೆ: ಆಳ್ವಾಸ್ ಎಜುಕೇಶನ್ ಫೌಂಡೇಶನ್ ಆಶ್ರಯದಲ್ಲಿ ನ. 11ರಿಂದ 13ರ ತನಕ ಮೂಡಬಿದಿರೆಯಲ್ಲಿ ನಡೆಯಲಿರುವ 8ನೇ ವರ್ಷದ ಆಳ್ವಾಸ್ ನುಡಿಸಿರಿಯ ಅಧ್ಯಕ್ಷರಾಗಿ ಸಂಶೋಧಕ ಎಂ.ಎಂ. ಕಲಬುರ್ಗಿ ಸರ್ವಾನುಮತದಿಂದ ಆಯ್ಕೆಗೊಂಡಿದ್ದಾರೆ ಎಂದು ಆಳ್ವಾಸ್ ನುಡಿಸಿರಿ ರೂವಾರಿ, ಆಳ್ವಾಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಎಂ.ಎಂ. ಕಲಬುರ್ಗಿ ಅವರು ಹಂಪಿ ವಿಶ್ವವಿದ್ಯಾನಿಲಯ ಕೊಡಮಾಡುವ ಪ್ರತಿಷ್ಠಿತ ನಾಡೋಜ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ. ಕಳೆದ ವರ್ಷ ಲೇಖಕಿ ವೈದೇಹಿ ನುಡಿಸಿರಿಯ ಸಾರಥ್ಯ ವಹಿಸಿದ್ದರು ಎಂದರು.
'ಕನ್ನಡ ಮನಸ್ಸು ಸಂಘರ್ಷ ಮತ್ತು ಸಾಮರಸ್ಯ' ಪರಿಕಲ್ಪನೆಯಲ್ಲಿ ಈ ಬಾರಿಯ ಆಳ್ವಾಸ್ ನುಡಿಸಿರಿ ಸಮ್ಮೇಳನ ನಡೆಯಲಿದೆ. ಕಳೆದ 7 ವರ್ಷಗಳಿಂದ ಆಳ್ವಾಸ್ ಸಮೂಹ ಸಂಸ್ಥೆ ಯಾವುದೇ ಸರಕಾರಿ ನೆರವು ಪಡೆಯದೆ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ನುಡಿಸಿರಿಯನ್ನು ಆಯೋಜಿಸುತ್ತಾ ಬಂದಿದ್ದು, ಸಮಯಪ್ರಜ್ಞೆ , ವ್ಯವಸ್ಥೆ, ಶಿಸ್ತುಬದ್ಧ ಕಾರ್ಯಕ್ರಮ ಸಂಯೋಜನೆಗಳ ಮೂಲಕ ಮಾದರಿ ಸಮ್ಮೇಳನ ಎಂಬ ಪ್ರಶಂಸೆಯನ್ನು ಸಮಸ್ತ ಕನ್ನಡಿಗರಿಂದ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಬಾರಿಯೂ ಸಮ್ಮೇಳನವನ್ನು ವ್ಯವಸ್ಥಿತ ರೀತಿಯಲ್ಲಿ ಸಂಯೋಜನೆಗೊಳಿಸುವ ನಿಟ್ಟಿನಲ್ಲಿ ರಾಜ್ಯದ ವಿವಿಧ ಕಡೆಗಳಲ್ಲಿ ಪೂರ್ವಭಾವೀ ಸಮಾಲೋಚನಾ ಸಭೆಗಳನ್ನು ನಡೆಸುವ ಬಗ್ಗೆ ಚಿಂತಿಸಲಾಗಿದೆ ಎಂದು ಡಾ| ಆಳ್ವ ತಿಳಿಸಿದರು.
ಆಳ್ವಾಸ್ ನುಡಿಸಿರಿ ಪೂರ್ವಭಾವೀ ಸಮಾಲೋಚನಾ ಸಭೆಗಳನ್ನು ತಮ್ಮ ಕ್ಷೇತ್ರಗಳಲ್ಲಿ ನಡೆಸಲು ಆಸಕ್ತ ಕನ್ನಡಾಭಿಮಾನಿಗಳು ಉತ್ಸುಕರಾಗಿದ್ದಲ್ಲಿ ಆಳ್ವಾಸ್ ಸಂಸ್ಥೆಯ ನುಡಿಸಿರಿ ಕಚೇರಿಯನ್ನು ಸಂಪರ್ಕಿಸಬಹುದು. ಪ್ರತಿವರ್ಷದಂತೆ ಈ ಬಾರಿಯೂ ನುಡಿಸಿರಿ ಸಮ್ಮೇಳನದ ಮೂರು ದಿನಗಳಲ್ಲೂ ರಾತ್ರಿ ಅಗ್ರಮಾನ್ಯ ಕಲಾವಿದರಿಂದ ಸಾಂಸ್ಕೃತಿಕ ವೈಭವ ಪ್ರದರ್ಶನಗೊಳ್ಳಲಿದೆ.
ಜಾಗತಿಕ ಸಮ್ಮೇಳನ
ಹತ್ತನೇ ವರ್ಷದ ನುಡಿಸಿರಿ ಸಮ್ಮೇಳನವನ್ನು ಜಾಗತಿಕ ಮಟ್ಟದ ಸಮ್ಮೇಳನವಾಗಿ ಆಯೋಜಿಸಲಾಗುವುದು. ಇದಕ್ಕೆ ಪೂರಕ ಯೋಜನೆ, ಯೋಚನೆಗಳು ಪ್ರಗತಿಯಲ್ಲಿವೆ. ವಿಭಿನ್ನವಾಗಿ, ಅತ್ಯಂತ ವೈಭವಯುತವಾಗಿ ಅಷ್ಟೇ ವ್ಯವಸ್ಥಿತವಾಗಿ ಹತ್ತನೇ ವರ್ಷದ ನುಡಿಸಿರಿ ಸಮ್ಮೇಳನ ಮೂಡಿಬರಲಿದೆ ಎಂಬ ಆಶಾಭಾವವನ್ನು ಡಾ| ಆಳ್ವ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನುಡಿಸಿರಿ ಸ್ವಾಗತ ಸಮಿತಿಯ ಕಾರ್ಯದರ್ಶಿ ಡಾ| ಧನಂಜಯ ಕುಂಬ್ಳೆ, ಹರೀಶ್ ಆದೂರು ಉಪಸ್ಥಿತರಿದ್ದರು.
Tuesday, September 27, 2011
Subscribe to:
Post Comments (Atom)
No comments:
Post a Comment