Sunday, November 1, 2009

ಮೂಡುಬಿದಿರೆಯಲ್ಲಿ ಆಳ್ವರ ಮೋಹನ ಮುರಳಿ

ಸತ್ಯನಾರಾಯಣ ಮಲ್ಲಿಪಟ್ಣ

ಮೂಡುಬಿದಿರೆಯ ಕವಿ ರತ್ನಾಕರ ವರ್ಣಿ ತನ್ನ ಕಾವ್ಯವನ್ನು ಕನ್ನಡಿಗರು ‘ಅಯ್ಯಯ್ಯ ಚೆನ್ನಾದುದು’ ಎಂದು, ತೆಲುಗರು ‘ಅಯ್ಯ ಮಂಚಿದಿ ಎಂದು, ತುಳುವ ‘ಅಯ್ಯಯ್ಯ ಎಂಚ ಪೊರ್ಲಾಂಡು’ ಎಂದು ಮಯ್ಯುಬ್ಬಿ ಕೇಳಬೇಕು ಎನ್ನುತ್ತಾನೆ. ಕಳೆದ ಆರು ವರ್ಷಗಳಿಂದ ಆಳ್ವಾಸ್ ನುಡಿಸಿರಿ ನೋಡುತ್ತಿರುವ ಎಲ್ಲರೂ ಮೋಹನ ಆಳ್ವರ ಏಕವ್ಯಕ್ತಿ ವ್ಯವಸ್ಥೆ ನೋಡಿ ಮಯ್ಯುಬ್ಬಿ ಹೋಗುತ್ತಾರೆ.

ದಕ್ಷಿಣ ಕನ್ನಡದ ಗುತ್ತಿನ ಮನೆಯಂಗಳದ ವಿಶಾಲ ಸುಂದರ ವೇದಿಕೆ. ಬಣ್ಣ ಬಣ್ಣದ ಚಿತ್ತಾರದ ಚಿತ್ತಾಕರ್ಷಕ ಸಭಾಂಗಣ. ಸೂರ್ಯದಯದಿಂದಲೇ ಆರಂಭವಾಗುವ ಕಾರ್ಯಕ್ರಮಗಳು. ಕಿವಿ ತುಂಬುವ ಚಂಡೆವಾದನ, ಮುದಗೊಳಿಸುವ ಸಂಗೀತ. ಬೆಳಗಿನ ತಂಪಾದ ಬೆಳಕಿನೊಂದಿಗೆ ಸಮ್ಮೇಳನಾಧ್ಯಕ್ಷರೊಂದಿಗೆ, ಆಳ್ವರೊಂದಿಗೆ ಪ್ರತಿನಿಧಿಗಳ ಸಂವಾದ ಬೆಳಗಿನಿಂದ ಸಂಜೆಯ ವರೆಗೆ ಮೂಲ ಸಭಾಂಗಣದ ವೇದಿಕೆಯಲ್ಲಿ ಸಾಹಿತ್ಯಗೋಷ್ಠಿ, ಕಾವ್ಯ ವಾಚನ- ಗಾಯನ, ಕಥಾ ಸಮಯ, ಸಂಸ್ಮರಣೆ, ನಗೆ ಹಬ್ಬ, ಸನ್ಮಾನ ಒಂದಲ್ಲ, ಎರಡಲ್ಲ, ಹಲವು ವೈವಿಧ್ಯಮಯ ಕಾರ್ಯಕ್ರಮಗಳು. ನಡುವೆ ಚಿಣ್ಣರಿಂದ ಮೆಲು ನುಡಿಗಳು. ಸಂಜೆಯಾದಾಗ ಶಿವರಾಮಕಾರಂತ ವೇದಿಕೆ, ಕೆ ವಿ ಸುಬ್ಬಣ್ಣ ಬಯಲು ರಂಗಮಂದಿರ, ನುಡಿಸಿರಿ ಸಭಾಂಗಣ- ಎಲ್ಲೆಲ್ಲೂ ಜನ ಜನ ಜನ. ಸಂಗೀತ, ನೃತ್ಯ, ನಾಟಕ, ಯಕ್ಷಗಾನ, ಹರಿಕಥೆ, ಜನಪದ ಕುಣಿತ. ಆಳ್ವರ ವಿದ್ಯಾಸಂಸ್ಥೆಗಳಿರುವ ವಿದ್ಯಾಗಿರಿ ಮಾಯಾಲೋಕದಲ್ಲಿ ಮಿನುಗುತ್ತದೆ. ನೋಡಲೇ ಬೇಕಾದ ಯಕ್ಷಗಾನದ ಪುತ್ಥಳಿಗಳು, ಅಗಲವಾದ ವರ್ಣರಂಜಿತ ಕೇದಿಗೆ ಕಿರೀಟ, ಹಾದಿಗುಂಟ ಬಣ್ಣಬಣ್ಣದ ಬೆಳಕಿನ ದೀಪಮಾಲೆ. ಮಾತು-ಹಾಡು-ಕುಣಿತ. ಹೊತ್ತು ಹೊತ್ತಿಗೆ ಸ್ವಚ್ಛ ಅಡಿಕೆಹಾಳೆಯಲ್ಲಿ ಹೊಟ್ಟೆ ತುಂಬಿಸುವ ರುಚಿ ಶುಚಿಯಾದ ಊಟ- ತಿಂಡಿ, ಪುಸ್ತಕ ಪ್ರೇಮಿಗಳಿಗೆ ಆಳ್ವರ ಕಾಲೇಜಿನ ಮೂರು ಮಾಳಿಗೆಯ ತುಂಬೆಲ್ಲ ಪುಸ್ತಕ ಪ್ರದರ್ಶನ, ಸಹಸ್ರಾರು ಮಂದಿ ಭಾಗವಹಿಸಿದರೂ ಎಲ್ಲೂ ನೂಕು-ನುಗ್ಗಲಿರುವುದಿಲ್ಲ, ಧಾವಂತವಿಲ್ಲ. ಆಳ್ವರ ಅಚ್ಚುಕಟ್ಟುತನ, ಶಿಸ್ತು ಎಲ್ಲ ಕಡೆ ಬಿಂಬಿತ. ಬಂದ ಎಲ್ಲರಿಗೆ ಆಳ್ವ ವಿದ್ಯಾಲಯದ ಹಾಸ್ಟೆಲುಗಳಲ್ಲಿ ವಾಸ. ಆಳ್ವರು ಕಟ್ಟಿಕೊಂಡಿರುವ ಅವರ ಸೈನ್ಯದ ಎಲ್ಲ ಯೋಧರೂ ಅಹರ್ನಿಶಿ ದುಡಿಯುತ್ತಾರೆ. ಬಂದವರನ್ನೆಲ್ಲ ಪ್ರೀತಿಯಿಂದ ಮಾತನಾಡಿಸುವ ಮೋಹನ ಆಳ್ವರ ಚುರುಕು ನಡೆನುಡಿ.

ಡಾ.ಎಂ.ಮೋಹನ ಆಳ್ವ. ಆಯುರ್ವೇದ ವೈದ್ಯರು. ಸ್ವತಃ ಕಲಾವಿದರು. ಐವತ್ತೇಳರ ಹರಯದ ಆಳ್ವರು ಈಗಲೂ ನುಡಿಸಿರಿಯಲ್ಲೊಂದು ದಿನ ವೇಷಹಾಕಿ ನರ್ತಿಸುವುದೂ ಉಂಟು. ಒಬ್ಬನೇ ವ್ಯಕ್ತಿ ಸರ್ಕಾರದ ಅಥವಾ ಮತ್ತೊಬ್ಬರ ನೆರವು ಕೋರದೆ ಲಕ್ಷಾಂತರ ರೂಪಾಯಿ ವ್ಯಯಿಸಿ ಈ ಸಾಂಸ್ಕೃತಿಕ ಸಂಭ್ರಮವನ್ನು ಏರ್ಪಡಿಸುವುದೇ ಸೋಜಿಗ.
ಮೂಡುಬಿದಿರೆಯಲ್ಲಿ 2003ರಲ್ಲಿ 71ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು. ಆ ಸಮ್ಮೇಳನದ ಸಾರಥ್ಯವನ್ನು ಮೋಹನ ಆಳ್ವರು ವಹಿಸಿದ್ದರು. ಈ ಅನುಭವದ ಹಿನ್ನೆಲೆಯಲ್ಲಿ ಮೂಡುಬಿದಿರೆಯಲ್ಲಿ ಪ್ರತಿವರ್ಷ ಸಾಹಿತ್ಯ ಸಮ್ಮೇಳನ ಯಾಕೆ ನಡೆಸಬಾರದು ಎಂಬ ಆಲೋಚನೆ ಅವರಲ್ಲಿ ಮೂಡಿತು. ಕೂಡಲೇ ಸಾಹಿತ್ಯಾಸಕ್ತರನ್ನು ಕಲೆಹಾಕಿದರು. ಹತ್ತಾರು ಸಭೆಗಳು. ಸಮ್ಮೇಳನದ ರೂಪುರೇಷೆ ಸಿದ್ಧವಾಯಿತು. ಆ ಹೊತ್ತಿಗೆ ‘ಆಳ್ವಾಸ್ ವಿರಾಸತ್’ ನಾಡಿನಾದ್ಯಂತ ಪರಿಚಿತವಾಗಿತ್ತು ಅಂತೆಯೇ ನಾಡಿನಾದ್ಯಂತ ಪರಿಚಿತವಾಗಬೇಕಾದ ಸಮ್ಮೇಳನವನ್ನು ರೂಪಿಸಲು ಆಳ್ವರು ನಿರ್ಧರಿಸಿದರು. ಈ ಸಮ್ಮೇಳನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪ್ರತಿಸ್ಪರ್ಧಿಯಾಗಬಾರದು, ಆದರೆ ವಿಶಿಷ್ಟವಾಗಬೇಕು, ಅನನ್ಯವಾಗಬೇಕು ಇದು ಆಳ್ವರ ಬಯಕೆ. ಚರ್ಚೆಗಳ ನಂತರ ಸಮ್ಮೇಳನ ನಡೆಯಬೇಕಾದ ಹಾದಿ ರೂಪುಗೊಂಡಿತು. ‘ಆಳ್ವಾಸ್ ನುಡಿಸಿರಿ -ನಾಡು-ನುಡಿಯ ರಾಷ್ಟ್ರೀಯ ಸಮ್ಮೇಳನ’ ಇದು ಸಮ್ಮೇಳನಕ್ಕಿಟ್ಟ ಹೆಸರು.


ಸಮ್ಮೇಳನದ ಅಧ್ಯಕ್ಷರು ಇಡೀ ಸಮ್ಮೇಳನದ ಸರ್ವಾಧ್ಯಕ್ಷರಾಗಬೇಕು. ಯಾವುದೇ ಗೋಷ್ಠಿಯಿರಲಿ, ಅದಕ್ಕೊಬ್ಬರು ಪ್ರತ್ಯೇಕ ಅಧ್ಯಕ್ಷರಿರಬಾರದು. ಅಧ್ಯಕ್ಷರ ಭಾಷಣ ವಿಶಿಷ್ಟವಾಗಿ ನಡೆಯಬೇಕು. ಅದು ಹತ್ತರಲ್ಲಿ ಇನ್ನೊಂದು ಆಗಬಾರದು ಇದು ಒಂದು ಆಲೋಚನೆ. ಅದೇ ಹಾದಿಯಲ್ಲಿ ನಡೆದು ಬಂದಿದೆ. ಈವರೆಗೆ ಬರಗೂರು ರಾಮಚಂದ್ರಪ್ಪ, ಎಸ್.ಎಲ್.ಭೈರಪ್ಪ, ಚಂದ್ರಶೇಖರ ಕಂಬಾರ, ಜಿ. ವೆಂಕಟಸುಬ್ಬಯ್ಯ, ಚನ್ನವೀರ ಕಣವಿ ಅಧ್ಯಕ್ಷತೆ ಒಪ್ಪಿ ನುಡಿಸಿರಿ ನಡೆಸಿದ್ದಾರೆ. ಈ ವರ್ಷ ಹಂಪ ನಾಗರಾಜಯ್ಯ ಅವರು ನಡೆಸಿಕೊಡಲಿದ್ದಾರೆ.

ವಿಷಯಾಧಾರಿತ ಚರ್ಚೆ: ಪ್ರತಿ ಸಮ್ಮೇಳನವೂ ಒಂದು ಬಿಡಿ ಬಿಡಿ ಪ್ರಬಂಧಗಳ ಗೋಷ್ಠಿಯಾಗಬಾರದು. ಒಂದು ವಿಷಯವನ್ನು ಪ್ರಧಾನವಾಗಿಟ್ಟು ಅದರ ಹಿನ್ನೆಲೆಯಲ್ಲಿ ಎಲ್ಲ ಚರ್ಚೆಗಳಾಗಬೇಕು ಎನ್ನುವುದು ಮತ್ತೊಂದು ಆಲೋಚನೆ. ಈ ನಿಟ್ಟಿನಲ್ಲಿ ಸಮ್ಮೇಳನ ನಡೆದುಬಂದಿದೆ. ಮೊದಲ ವರ್ಷ ಕನ್ನಡ ಮನಸ್ಸು: ಸಾಂಸ್ಕೃತಿಕ ಸವಾಲುಗಳು ಚರ್ಚೆಯ ವಿಷಯವಾಗಿದ್ದರೆ ಮುಂದಿನ ವರ್ಷಗಳಲ್ಲಿ ಬೌದ್ಧಿಕ ಸ್ವಾತಂತ್ರ್ಯ; ಪ್ರಚಲಿತ ಪ್ರಶ್ನೆಗಳು; ಸಾಹಿತಿಯ ಜವಾಬ್ದಾರಿಗಳು; ಶಕ್ತಿ ಮತ್ತು ವ್ಯಾಪ್ತಿ ಎಂಬುವು ಚರ್ಚೆಯ ವಿಷಯಗಳಾಗಿದ್ದವು. ಈ ವರ್ಷ ‘ಕನ್ನಡ ಮನಸ್ಸು : ಸಮನ್ವಯದೆಡೆಗೆ’ ಎಂಬ ವಿಷಯದ ಸುತ್ತ ಸಮ್ಮೇಳನ ನಡೆಯಲಿದೆ.

ಕವಿ ಸಮಯ: ಇಲ್ಲಿ ಹತ್ತಾರು ಕವಿಗಳನ್ನು ಒಂದೆಡೆ ಗುಡ್ಡೆ ಹಾಕಿ ಕವಿಗೋಷ್ಠಿ ನಡೆಯುವುದಿಲ್ಲ. ಪ್ರತಿಯೊಬ್ಬ ಕವಿಗೆ ವಿಶೇಷ ಮನ್ನಣೆಯಿದೆ. ಕವಿ ತನ್ನ ಕಾವ್ಯಸೃಷ್ಟಿಯ ಹಿನ್ನೆಲೆಯನ್ನು ಕುರಿತು ಮಾತನಾಡುತ್ತಾನೆ. ಕವನ ವಾಚಿಸುತ್ತಾನೆ. ನಾಡಿನ ಪ್ರಸಿದ್ಧ ಗಾಯಕರು ಆ ಕವನಕ್ಕೆ ರಾಗ ಹಾಕಿ ಹಾಡುತ್ತಾರೆ. ಒಂದು ಗೋಷ್ಠಿಗೆ ಒಬ್ಬ ಕವಿ ಮಾತ್ರ. ಆ ಕವಿಗೇ ಆ ಸಮಯ, ಆ ಕವಿಗೆ ನುಡಿಸಿರಿ ನಮನ.

ಕಥಾ ಸಮಯ: ಕವಿಗಳಷ್ಟೇ ಕಥೆಗಾರರಿಗೂ ಇಲ್ಲಿ ಮನ್ನಣೆ. ಕಥೆಗಾರ ತನ್ನ ಬರವಣಿಗೆಯ ಹಿನ್ನೆಲೆ ಕುರಿತು ಮಾತನಾಡುವುದು. ಕಳೆದ ವರ್ಷ ಪ್ರಾರಂಭವಾದ ಈ ಗೋಷ್ಠಿ ತುಂಬಾ ಆಕರ್ಷಕ ಎನಿಸಿದೆ.

ಸಂಸ್ಮರಣೆ: ನೂರು ತುಂಬಿದ ಸಾಹಿತಿಗಳು, ಒಂದು ವರ್ಷದಲ್ಲಿ ನಮ್ಮನ್ನಗಲಿದ ಸಾಹಿತಿಗಳ ಸಂಸ್ಮರಣೆ ಒಂದು ಕಾರ್ಯಕ್ರಮ. ನುಡಿಸಿರಿಯ ಮೂರು ದಿನಗಳೂ ಇಂಥ ಸಾಹಿತಿಗಳ ಬದುಕು, ಬರಹ ಕುರಿತು ನಾಡಿನ ವಿದ್ವಾಂಸರು ಸ್ಮರಿಸಿಕೊಳ್ಳುತ್ತಾರೆ.

ಮಾತಿನ ಮಂಟಪ: ಬೆಳಗಿನಿಂದ ಗೋಷ್ಠಿಗಳಲ್ಲಿ ಮಿದುಳು ದೀಪ್ತಗೊಳಿಸುವ ಚರ್ಚೆ. ಸಂಜೆಯಾಗುತ್ತಿದ್ದಂತೆ ಮೂಡುಬಿದಿರೆಯ ಸಾರ್ವಜನಿಕರಿಗೆ ಸಮ್ಮೇಳನಕ್ಕೆ ಪ್ರವೇಶ. ಈ ಸಮಯದಲ್ಲಿ ಕನ್ನಡದ ಮಾತಿನ ಶಕ್ತಿಯನ್ನು, ಪಲುಕು-ಉಲುಕುಗಳನ್ನು ಹಗುರ ಲಹರಿಯಲ್ಲಿ ಹರಡುವ ಮಾತಿನ ಮಂಟಪ ಕಾರ್ಯಕ್ರಮ.

ಯುವಜನತೆಯ ಸಿರಿ: ಕನ್ನಡದ ಮಾತು ಉಳಿಯಬೇಕಾದರೆ, ಅದರ ಚಿಂತನೆಯ ದಾರಿ ಹರಿಯಬೇಕಾದರೆ ನಾಡಿನ ಯುವಕರು ಈ ಉತ್ಸವದಲ್ಲಿ ಪಾಲ್ಗೊಳ್ಳಬೇಕು. ಕನ್ನಡದ ಮುಂದಿನ ಹಾದಿಯ ರೂವಾರಿಗಳು ಅವರು. ಅವರಿಗೆ ನಮ್ಮೆಲ್ಲ ಆಲೋಚನೆಗಳು ಮುಟ್ಟಬೇಕು. ಇದು ಆಳ್ವರ ಚಿಂತನೆ. ಹೀಗಾಗಿ ವಿದ್ಯಾರ್ಥಿ ವರ್ಗಕ್ಕೆ ಇಲ್ಲಿ ವಿಶೇಷ ಆದರ. ಅವರಿಗೆ ಪ್ರತಿನಿಧಿ ಶುಲ್ಕವಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳನ್ನು ಆಳ್ವರು ತಮ್ಮದೇ ಬಸ್ಸಿನಲ್ಲಿ ಕರೆತರುತ್ತಾರೆ. ಹೀಗಾಗಿ ನುಡಿಸಿರಿ ಪ್ರತಿವರ್ಷ ಯುವಸಿರಿಯಾಗಿ ಬೆಳಗುತ್ತದೆ.

ಶಿಸ್ತು ಸಮಯ ಪಾಲನೆ: ಕವಿ ಡುಂಡಿರಾಜರು ಒಮ್ಮೆ ಕವಿಗೋಷ್ಠಿಯಲ್ಲಿ ಸೃಷ್ಟಿಸಿದ ಕವನ ಹೀಗಿತ್ತು.
ಕವಿಗಳು ಮಾಡುತ್ತಿದ್ದಾರೆ ಕವನ ವಾಚನ
ಆಳ್ವರು ನೋಡುತ್ತಿದ್ದಾರೆ ತಮ್ಮ ವಾಚನ್ನ

ಆಳ್ವರು ನಡೆಸುವ ಸಣ್ಣ ಸಭೆಯಿರಲಿ, ದೊಡ್ಡ ಸಮ್ಮೇಳನವಿರಲಿ, ಅಲ್ಲಿ ಸಮಯಪಾಲನೆ ಒಂದು ಕಟ್ಟುನಿಟ್ಟಿನ ವ್ರತ. ಈ ವ್ರತ ಇಂದಿಗೂ ತಪ್ಪಿಲ್ಲ. ನುಡಿಸಿರಿಯಲ್ಲೂ ಇದೇ ಮುಂದುವರೆದಿದೆ. ಕಾರ್ಯಕ್ರಮ ಆರಂಭದ ಸಮಯ ಮುಕ್ತಾಯದ ನಂತರ ನುಡಿಸಿರಿ ಹಾಡು ಮೊಳಗುತ್ತದೆ. ಸಭಾರಂಭಕ್ಕೆ ಅದೇ ಗುರುತು. ಭಾಷಣ ಮಾಡುವವರ ಮಾತಿನ ನಿಲುವಿನಲ್ಲೂ ಜನರಿಗೆ ಕಾಣದಂತೆ ಕೆಂಪು ದೀಪ ಮಿನುಗುತ್ತದೆ. ಭಾಷಣಕಾರರಿಗೆ ಸಮಯದ ಸೂಚನೆಯಿದು. ಆಳ್ವರ ಸಮಯ ಪ್ರಜ್ಞೆ ಈಗ ದೇಶವ್ಯಾಪಿ.

ಜಾಗತೀಕರಣ, ಉದಾರೀಕರಣ ಎಂದೆಲ್ಲ ಹೇಳುವ, ಕನ್ನಡ ನಾಡು ನುಡಿಯ ಬಗೆಗೆ ಕಳಕಳಿಯ ಮಾತನಾಡುವ ಎಲ್ಲರಿಗೆ ಈ ಸಮ್ಮೇಳನ ಒಂದು ಮಾದರಿ. ಐಷಾರಾಮೀ ಬದುಕಿನ ಈ ಕಾಲದಲ್ಲಿ ತನ್ನ ಸಂಪತ್ತನ್ನು ನಾಡಿನ ಸಂಸ್ಕೃತಿಯ ಒಳಿತಿಗಾಗಿ ಧಾರೆಯೆರೆಯುವ ಮಂದಿ ಅತಿ ವಿರಳ. ಅಂಥ ವಿರಳರಲ್ಲಿ ಒಬ್ಬರು ಡಾ ಆಳ್ವ. ಅವರ ಎಲ್ಲ ಕಾರ್ಯಕ್ರಮಗಳು ಒಂದೊಂದು ಸಾಂಸ್ಕೃತಿಕ ಶೋಧ, ಬತ್ತದ ಪೈರಿಗೆ ಹಾಲು ಸುರಿದು ಸಮೃದ್ಧಿ ಸೂಚಕ ಉದ್ಘಾಟನೆ. ಭಾಗವತಿಕೆಯಲ್ಲಿ ಕೃತಜ್ಞತೆ, ಎಲ್ಲರೊಳಗೊಂದಾಗುವ ಸಜ್ಜನಿಕೆ. ಇವೆಲ್ಲ ನಾಡಿನ ಸಂಸ್ಕೃತಿಯ ಸಾಕಾರ ರೂಪ.
(ನ.6 ರಿಂದ ಮೂಡುಬಿದಿರೆಯಲ್ಲಿ ಆರನೇ ರಾಷ್ಟ್ರೀಯ ‘ನುಡಿಸಿರಿ’)

No comments: