Tuesday, September 27, 2011

ಆಳ್ವಾಸ್ ನುಡಿಸಿರಿಗೆ ನಾಂದಿ

ರಾಜ್ಯ - ರಾಷ್ಟ್ರ

ನವೆಂಬರ್ 11 - 13 : ಮೂಡಬಿದಿರೆಯಲ್ಲಿ ಕನ್ನಡದ ಕಲರವ




ಮೂಡಬಿದಿರೆ: ಆಳ್ವಾಸ್ ಎಜುಕೇಷನ್ ಫೌಂಡೇಷನ್ ಆಶ್ರಯದಲ್ಲಿ ಎಂಟನೇ ವರುಷದ " ಆಳ್ವಾಸ್ ನುಡಿಸಿರಿ" ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ಇದೇ ನವೆಂಬರ್ 11, 12 ಮತ್ತು 13ರಂದು ಮೂಡಬಿದಿರೆಯ ವಿದ್ಯಾಗಿರಿಯಲ್ಲಿರುವ ಸುಂದರಿ ಆನಂದ ಆಳ್ವ ಕ್ಯಾಂಪಸ್ ನಲ್ಲಿ ಹಲವು ವೈಶಿಷ್ಟ್ಯಗಳೊಂದಿಗೆ, ಶಿಸ್ತುಬದ್ಧ ರೀತಿಯಲ್ಲಿ ನಡೆಯಲಿದೆ.ಇದಕ್ಕಾಗಿ ಭರದ ಸಿದ್ಧತೆಗಳು ಪ್ರಾರಂಭವಾಗಿದೆ ಎಂದು ಆಳ್ವಾಸ್ ನುಡಿಸಿರಿ ರೂವಾರಿ, ಆಳ್ವಾಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.


ಕಳೆದ ಏಳು ವರುಷಗಳಿಂದ ಆಳ್ವಾಸ್ ಸಮೂಹ ಸಂಸ್ಥೆ ಯಾವುದೇ ಸರಕಾರಿ ನೆರವನ್ನೂ ಪಡೆಯದೆ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ನುಡಿಸಿರಿಯನ್ನು ಆಯೋಜಿಸುತ್ತಾ ಬಂದಿದ್ದು, ಸಮಯಪ್ರಜ್ಞೆ, ವ್ಯವಸ್ಥೆ,ಶಿಸ್ತುಬದ್ಧ ಕಾರ್ಯಕ್ರಮ ಸಂಯೋಜನೆಗಳ ಮೂಲಕ "ಮಾದರಿ ಸಮ್ಮೇಳನ" ಎಂಬ ಪ್ರಶಂಸೆಯನ್ನು ಸಮಸ್ತ ಕನ್ನಡಿಗರಿಂದ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಬಾರಿಯೂ ಸಮ್ಮೇಳನವನ್ನು ಸಂಪೂರ್ಣ ಪಾರದರ್ಶಕವಾಗಿ, ವ್ಯವಸ್ಥಿತ ರೀತಿಯಲ್ಲಿ ಸಂಯೋಜನೆಗೊಳಿಸುವ ನಿಟ್ಟಿನಲ್ಲಿ , ಸಮ್ಮೇಳನದಲ್ಲಿ ಜನತೆಯ ಸಹಭಾಗಿತ್ವ ಇನ್ನಷ್ಟು ಮೂಡಬೇಕೆಂಬ ಮಹತ್ವಾಕಾಂಕ್ಷೆಯಿಂದ ಕರ್ನಾಟಕದ ವಿವಿಧ ಕಡೆಗಳಲ್ಲಿ ನುಡಿಸಿರಿ ಪೂರ್ವಭಾವೀ ಸಮಾಲೋಚನಾ ಸಭೆಗಳನ್ನು ನಡೆಸುವ ಬಗ್ಗೆ ಚಿಂತಿಸಲಾಗಿದೆ ಎಂದು ಡಾ.ಆಳ್ವ ತಿಳಿಸಿದರು.

ರಾಜ್ಯದ ಆಯ್ದ ಪ್ರದೇಶಗಳಲ್ಲಿ ಈ ಸಮಾಲೋಚನಾ ಸಭೆ ನಡೆಸಲು ಉದ್ದೇಶಿಸಲಾಗಿದೆ. ನುಡಿಸಿರಿ ಪೂರ್ವಭಾವೀ ಸಮಾಲೋಚನಾ ಸಭೆಗಳನ್ನು ತಮ್ಮ ಕ್ಷೇತ್ರಗಳಲ್ಲಿ ನಡೆಸಲು ಆಸಕ್ತ ಕನ್ನಡಾಭಿಮಾನಿಗಳು ಉತ್ಸುಕರಾಗಿದ್ದಲ್ಲಿ ಆಳ್ವಾಸ್ ಸಂಸ್ಥೆಯ ನುಡಿಸಿರಿ ಕಛೇರಿಯನ್ನು ಸಂಪರ್ಕಿಸಬಹುದು. ಸಮಾಲೋಚನಾ ಸಭೆಗಳನ್ನು ನಡೆಸುವ ಸಂದರ್ಭದಲ್ಲಿ ಸಮ್ಮೇಳನಕ್ಕೆ ಸದಸ್ಯರಾಗಿ ಭಾಗವಹಿಸಲು ಉತ್ಸಕರಾಗಿರುವವರು ಸ್ಥಳದಲ್ಲೇ ಹೆಸರು ನೋಂದಾಯಿಸಿ ಸದಸ್ಯತ್ವ ಪಡೆದುಕೊಳ್ಳಲು ಅವಕಾಶವಿರುತ್ತದೆ.

ಜಾಗತಿಕ ಸಮ್ಮೇಳನ
ಹತ್ತನೇ ವರುಷದ ನುಡಿಸಿರಿ ಸಮ್ಮೇಳನವನ್ನು ಜಾಗತಿಕ ಮಟ್ಟದ ಸಮ್ಮೇಳನವಾಗಿ ಆಯೋಜಿಸಲಾಗವುದು. ಇದಕ್ಕೆ ಪೂರಕ ಯೋಜನೆ, ಯೋಚನೆಗಳು ಪ್ರಗತಿಯಲ್ಲಿವೆ. ವಿಭಿನ್ನವಾಗಿ, ಅತ್ಯಂತ ವೈಭವಯುತವಾಗಿ ಅಷ್ಟೇ ವ್ಯವಸ್ಥಿತವಾಗಿ ಹತ್ತನೇ ವರುಷದ ನುಡಿಸಿರಿ ಸಮ್ಮೇಳನ ಮೂಡಿಬರಲಿದೆ ಎಂಬ ಆಶಾಭಾವವನ್ನು ಡಾ.ಆಳ್ವ ವ್ಯಕ್ತಪಡಿಸಿದರು.

ಎಲ್ಲಾಜಿಲ್ಲೆಯಿಂದ ಪ್ರತಿನಿಧಿಗಳು
ಈ ಬಾರಿಯ ನುಡಿಸಿರಿಗೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ಕನ್ನಡಾಸಕ್ತರು ಪ್ರತಿನಿಧಿಗಳಾಗಿ ಭಾಗವಹಿಸಬೇಕೆಂಬ ಆಸೆ ನಮ್ಮದು. ಕಳೆದ ವರುಷವೂ ಬಹುತೇಕ ಎಲ್ಲಾ ಜಿಲ್ಲೆಗಳಿಂದ ಪ್ರತಿನಿಧಿಗಳು ಆಗಮಿಸಿದ್ದಾರೆ.ಈ ಬಾರಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿನಿಧಿಗಳಾಗಿ ಕನ್ನಡಿಗರು ಈ ಸಮ್ಮೇಳನದಲ್ಲಿ ಪಾಲ್ಗೊಳ್ಳಬೇಕೆಂಬುದು ನಮ್ಮ ಆಸೆ. ಇದಕ್ಕಾಗಿ ಪ್ರತೀ ಜಿಲ್ಲೆಯಲ್ಲಿಯೂ ನುಡಿಸಿರಿಯ ಬಗ್ಗೆ ಸೂಕ್ತ ಮಾಹಿತಿ ಲಭ್ಯವಾಗುವಂತೆ ಪ್ರಚಾರ ಕೈಗೊಳ್ಳಲಾಗುವುದು ಎಂದರು.

ಯುವ ಮನಸ್ಸು ಪಾಲ್ಗೊಳ್ಳಲಿ
ಯುವ ಮನಸ್ಸುಗಳು ಕನ್ನಡವನ್ನು ಕಟ್ಟುವ, ಬೆಳೆಸುವ ಕಾರ್ಯ ಮಾಡಬೇಕಾಗಿದೆ. ಇಂತಹ ಯುವ ಮನಸ್ಸುಗಳು ಹೆಚ್ಚಿನ ಸಂಖ್ಯೆಯಲ್ಲಿ ನುಡಿಸಿರಿ ಸಮ್ಮೇಳನದಲ್ಲಿ ಭಾಗವಹಿಸಬೇಕಾಗಿದೆ. ಯುವ ಜನತೆಯಲ್ಲಿ ಕನ್ನಡದ ಬಗೆಗಿನ ಆಸಕ್ತಿ ಉಂಟಾದಲ್ಲಿ ಮಾತ್ರ ಕನ್ನಡದ ಬೆಳವಣಿಗೆ ಸಾಧ್ಯ. ಆ ನಿಟ್ಟಿನಲ್ಲಿ ಯುವ ಮನಸ್ಸುಗಳು ಈ ಸಮ್ಮೇಳನದಲ್ಲಿ ಭಾಗವಹಿಸಲು ಉತ್ಸುಕರಾಗಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಮಾಧ್ಯಮ ಸಂಪರ್ಕಾಧಿಕಾರಿ, ಪತ್ರಿಕೋದ್ಯಮ ಉಪನ್ಯಾಸಕ ಹರೀಶ್ ಕೆ.ಆದೂರು ಉಪಸ್ಥಿತರಿದ್ದರು.

No comments: